ಪೂಜ್ಯ ಶ್ರೀ ಸುರೇಂದ್ರ ಗುರೂಜಿಯವರ ವಿಚಾರಧಾರೆ
ವಿಶಾಲವಾದ ವಿಶ್ವವೇ ಮಂದಿರ, ಜೀವಿಗಳೆಲ್ಲರೂ ದೇವರು, ನಾವೇ ಪೂಜಾರಿಗಳು. ಜೀವಿಗಳನ್ನು ಸಂತೋಷಗೊಳಿಸುವದೇ ದೇವ ಪೂಜೆ. ಒಬ್ಬರಿಗೊಬ್ಬರು ದೇವರೆಂದು ತಿಳಿದುಕೊಂಡು ಸಂತೋಷಗೊಳಿಸಿದರೆ ವಿಶ್ವದಲ್ಲಿ ಶಾಂತಿಯು ನೆಲೆಸುವದು. ನಾವೆಲ್ಲರೂ ಒಂದೇ ದೇವನ ದೇಟಿನ ಕಾಯಿಗಳು, ಒಂದೇ ದೇಟಿನ ಮಾವುಗಳು. ದೇಹಗಳು ಬೇರೆ ಬೇರೆಯಾದರೂ ನಮ್ಮೆಲ್ಲರ ದೇಹಗಳಲ್ಲಿ ಇರುವ ಪರಮಾತ್ಮನು ಒಬ್ಬನೇ ಇದ್ದಾನೆ, ಆದ್ದರಿಂದ ನಾವೆಲ್ಲರೂ ಒಂದು. ಪರಸ್ಪರ ಪ್ರೇಮವೇ ಜೀವನ, ದ್ವೇಷವೇ ಮರಣ, ದ್ವೇಷವಿದ್ದವನೇ ಪಿಶಾಚಿಯು. ಪ್ರೇಮದಿಂದ ದ್ವೇಷವು ಶಾಂತವಾಗುವದು, ದ್ವೇಷದಿಂದ ದ್ವೇಷವು ಎಂದೂ ಶಾಂತವಾಗಲಾರದು. ಪ್ರೇಮ ಮಾಡುವದು ದೇವನ ಸ್ವಭಾವ, ದ್ವೇಷ ಮಾಡುವದು ರಾಕ್ಷಸಿ ಸ್ವಭಾವ. ಏಕತ್ವವೇ ಜೀವನ, ಭೇದತ್ವವೇ ಮರಣ. ನಾವು ಎಲ್ಲರೂ ಒಂದು ಎಂದಾಗ ಸುಖ, ನಾನು ಹೆಚ್ಚು, ನೀನು ಕಡಿಮೆ ಎಂದಾಗ ದುಃಖ. ಮನೆಯಲ್ಲಾಗಲಿ ಓಣಿಯಲ್ಲಾಗಲಿ ಊರಲ್ಲಾಗಲಿ, ತಾಲೂಕು ಜಿಲ್ಲೆ ರಾಜ್ಯ ದೇಶ ಪ್ರಪಂಚದಲ್ಲಿಯೇ ಆಗಲಿ, ಪ್ರೇಮವು ಇದ್ದರೆ ಸುಖವೇ ನೆಲೆಸುವದು. ವೈರತ್ವವು ಇದ್ದರೆ ದುಃಖವೇ ನೆಲೆಸುವದು; ತನ್ನ ಸಿಟ್ಟು ತನಗೇ ವೈರಿ, ತನ್ನ ಶಾಂತಿ ತನಗೇ ಮಿತ್ರ, ತನ್ನ ಶಾಂತಿ ಪರರಿಗೆ ವೈರಿ. ತಾಳ್ಮೆಗಿಂತ ಅನ್ಯ ತಪವಿಲ್ಲ. ಲಗ್ನವಾಗುವದು ಪರಸ್ಪರ ಸೇವೆಗಾಗಿ ಮತ್ತು ಆತ್ಮನ ಸುಖವನ್ನು ಹೊಂದುವದಕ್ಕಾಗಿ ಇದೆ. ಮಕ್ಕಳನ್ನು ಪಡೆಯುವದಕ್ಕಾಗಿ ಮಾತ್ರ ಭೋಗವು, ಭೋಗದಿಂದ ಸುಖವನ್ನು ಪಡೆಯುವದಕ್ಕಾಗಿ ಅಲ್ಲ. ಪತಿ ಪತ್ನಿಯರಾಗುವದು ನೀತಿಯಿಂದ ನಡೆದು, ಆತ್ಮಜ್ಞಾನಿಗಳಿಗೆ ಜನ್ಮವನ್ನು ಕೊಡುವದಕ್ಕಾಗಿ. ಚೆಂದದ ಬೆನ್ನು ಹತ್ತಿದರೆ ಪತಿವೃತವನ್ನಾಗಲಿ ಪತ್ನಿವೃತವನ್ನಾಗಲಿ ಪಾಲಿಸುವದು ಸಾಧ್ಯವೇ ಇಲ್ಲ. ಚೆಂದದ ಬೆನ್ನು ಹತ್ತಿದರೆ ಸ್ತ್ರೀ ಪುರುಷರ ಮೋಹದಲ್ಲಿ ಬಿದ್ದು, ವ್ಯಭಿಚಾರಿಗಳಾಗುವದೇ, ಬಡಿಸಿಕೊಂಡು ಚೆಂದಗೇಡಿಗಳಾಗುವದೇ; ಆದ್ದರಿಂದ ನೀತಿಯೇ ಚೆಂದ. ಕಾಮ ವಿಕಾರವು ಮದುವೆಯಾದರೂ ನಾಶವಾಗುವದಿಲ್ಲ, ಮದುವೆಯು ಆಗದಿದ್ದರೂ ನಾಶವಾಗುವದಿಲ್ಲ, ಆದ್ದರಿಂದ ಮದುವೆಯು ಆಗಲಿ ಅಥವಾ ಆಗದಿರಲಿ, ಯಾರು ವಿವೇಕದಿಂದ ಕಾಮನನ್ನು ನಾಶ ಮಾಡುವರೋ ಅವರೇ ಸುಖಿಗಳು. ವಿಶ್ವವೇ ನನ್ನ ಮನೆ, ಜೀವ ಕುಲವೇ ನನ್ನ ಕುಟುಂಬ; ಜಗವೆಲ್ಲವೂ ನಾನೇ, ಜಗದೊಡೆಯನೂ ನಾನೇ. ರೋಗಿ ನಕ್ಕಾಗ ವೈದ್ಯ ನಕ್ಕ, ರೋಗಿ ಅತ್ತಾಗ ವೈದ್ಯ ಅತ್ತ; ವೈದ್ಯರಿಗೆ ರೋಗಿಗಳೇ ದೇವರು, ವೈದ್ಯರೇ ರೋಗಿಗಳ ಪೂಜಾರಿಗಳು, ಇದೇ ವೈದ್ಯರ ನೀತಿಯು. ಆಹಾರ ನಿದ್ರೆ ಭಯ ಮೈಥುನಗಳೇ ಮಾನವನ ಜೀವನದ ಗುರಿಯಾದರೆ, ಶರೀರವನ್ನು ಬಿಟ್ಟ ಮೇಲೆ ಅವರು ನಾಯಿ ನರಿ ಹಂದಿಗಳಾಗಿ ಹುಟ್ಟಬೇಕಾಗುವದು. ಪರಸ್ತ್ರೀಯರನ್ನು ತಾಯಿಯಂತೆ, ಪರಪುರುಷರನ್ನು ತಂದೆಯಂತೆ, ಪರರ ವಸ್ತುಗಳನ್ನು ಮಣ್ಣಿನಂತೆ ಮತ್ತು ಎಲ್ಲರನ್ನು ತನ್ನಂತೆ ಎಂದು ಯಾವನು ತಿಳಿದುಕೊಳ್ಳುವನೋ ಅವನೇ ಸಾಮಾನ್ಯ ಪಂಡಿತನು. ನೀವು ಶಿಕ್ಷÀಣವನ್ನು ಕಲಿಯದಿದ್ದರೂ ಅಡ್ಡಿಯಿಲ್ಲ, ಆದರೆ ಉಪಕಾರ ಮಾಡುವದನ್ನು ಕಲಿತರೆ ಸಾಕು, ತಮಗೆ ಅಪಕಾರ ಮಾಡಿದವರಿಗೆ ಉಪಕಾರ ಮಾಡುವದೇ ನೀತಿಯು. ವಿಷಯಗಳಲ್ಲಿ ಅತಿ ಮೋಹವಿದ್ದವರು ನೀತಿಯಿಂದ ನಡೆಯುವದು ಎಂದಿಗೂ ಸಾಧ್ಯವಿಲ್ಲ. ವಿಷಯ ವಸ್ತುಗಳನ್ನು ಹಂಚಿಕೊಂಡು ಉಪಭೋಗ ಮಾಡುವದೇ ನೀತಿಯು. ಇದರಿಂದ ಸಮಾಜದಲ್ಲಿ ಜಗಳ ಕಾಳಗ ಯುದ್ಧ ಮಹಾ ಯುದ್ಧಗಳು ನಿಂತು ಹೋಗಿ ಜಾಗತಿಕ ಶಾಂತಿಯು ನೆಲೆಸುವದು. ಆದ್ದರಿಂದ ನೀತಿ ಪಾಲನೆಯಿಂದ ಸಾಮಾಜಿಕ ಶಾಂತಿ.
ವಿಷಯಗಳ ಆಶೆಯಿಂದಲೇ ಜೀವನು ಹುಟ್ಟು ಸಾವುಗಳೆಂಬ ಕರ್ಮದ ಚಕ್ರದಲ್ಲಿ ಸಿಕ್ಕು ಬಳಲುತ್ತಿದ್ದಾನೆ. ಹಿತಾಹಿತ ವಿಚಾರವು ನಡೆಯದ ಮನೆಯು ಸ್ಮಶಾನವಿದ್ದಂತೆ, ಅಲ್ಲಿ ಪಿಶಾಚಿಗಳು ವಾಸವಾಗುತ್ತವೆ. ಜೀವವು ಇಂದೇ ಹೋಗಲಿ, ಆದರೆ ವಿಷಯ ವಾಸನೆಗಳು ಉಳಿಯಬಾರದು. ಮಾನವ ಜನ್ಮಕ್ಕಿಂತ ಶ್ರೇಷ್ಠವಾದ ಜನ್ಮವು ಈ ಲೋಕದಲ್ಲಿಯೇ ಇಲ್ಲ, ಏಕೆಂದರೆ ಮಾನವನಿಗೆ ವಿವೇಕವಿದೆ, ಈ ವಿವೇಕದಿಂದ ಅವನು ದುಃಖವನ್ನು ಪೂರ್ಣವಾಗಿ ಕಳೆದುಕೊಂಡು, ಶಾಶ್ವತ ಸುಖವನ್ನು ಹೊಂದಬಲ್ಲನು, ಇದು ಉಳಿದ ಪಶು ಪಕ್ಷ್ಯಾದಿಗಳಿಗೆ ಸಾಧ್ಯವಿಲ್ಲ, ಏಕೆಂದರೆ ಅವುಗಳಿಗೆ ವಿವೇಕವಿಲ್ಲ. ನೀವು ಈ ಪ್ರಪಂಚವನ್ನು ಎಷ್ಟು ಮರೆಯುತ್ತೀರಿ ಅಷ್ಟು ಸುಖಿಯಾಗುತ್ತೀರಿ, ಎಷ್ಟು ಪ್ರಪಂಚವನ್ನು ಹಚ್ಚಿಕೊಳ್ಳುತ್ತೀರಿ ಅಷ್ಟು ದುಃಖಿಯಾಗುತ್ತೀರಿ. ಮಾನವನು ನಿದ್ರೆಯಲ್ಲಿ ದೇಹ ಮತ್ತು ಪ್ರಪಂಚವನ್ನು ಮರೆತು ಬಿಟ್ಟು, ಮರೆತು ಅರಿವು ರೂಪಾಗಿ ಉಳಿಯುವದರಿಂದ ತಾತ್ಪೂರ್ತಿಕ ಸುಖವನ್ನು ಹೊಂದುವನು; ಈಗ ನಾವು ದೇಹ ಮತ್ತು ಪ್ರಪಂಚವನ್ನು ತಿಳಿದು ಬಿಟ್ಟು, ತಿಳಿದು ಅರಿವು ರೂಪಾಗಿ ಉಳಿದರೆ ಶಾಶ್ವತ ಆನಂದವು ಪ್ರಾಪ್ತಿಯಾಗುತ್ತದೆ. ಮನಸ್ಸು ಚಂಚಲವಾದಾಗ ದುಃಖ, ಮನಸ್ಸು ನಿಶ್ಚಲವಾದಾಗ ಸುಖ. ವಿಷಯ ವ್ಯಾಮೋಹವನ್ನು ವಿಚಾರವೆಂಬ ಬೆಂಕಿಯಿಂದ ಸುಟ್ಟು ಹಾಕಿ, ಆತ್ಮನಲ್ಲಿಯೇ ಸುಖವಿದೆ ಎಂದು ತಿಳಿದು, ಆತ್ಮನಲ್ಲಿ ನೆಲೆಯಾಗಿ ನಿಲ್ಲುವದೇ ತಪಸ್ಸು. ಮಾನವ ದೇಹವಿದ್ದು, ವಿವೇಕವು ಇಲ್ಲದಿದ್ದರೆ ಏನು ಫಲ? ಮಾನವನು ತನ್ನ ದೈವದ ಶಿಲ್ಪಿ ತಾನೇ ಇರುವನು. ನಾವು ಪಿಶಾಚಿಯಂಥ ಕೆಲಸವನ್ನು ಮಾಡಿ, ಪಿಶಾಚಿ ಜನ್ಮವನ್ನು ಪಡೆಯಲೂ ಬರುತ್ತದೆ, ಅಧ್ಯಾತ್ಮ ಸಾಧನೆಯನ್ನು ಮಾಡಿ ದೇವನಾಗಿ ಇರಲೂ ಬರುತ್ತದೆ. ಈ ವಿಶ್ವವು ಕೋಟಿ ಕೋಟಿ ಸಲ ನಾಶವಾದರೂ ತಾನು ಮಾಡಿದ ಕರ್ಮದ ಫಲವನ್ನು ಉಂಡೇ ತೀರಿಸಬೇಕಾಗುವುದು. ಆದ್ದರಿಂದ ವಿಷಯಗಳ ಮೋಹವನ್ನು ಬಿಡುವದರಿಂದ ಮಾನಸಿಕ ಶಾಂತಿ.
ಎಲ್ಲ ಮಾನವ ಮಾತ್ರರ ಗುರಿ ಶಾಶ್ವತ ಸುಖವನ್ನು ಹೊಂದುವದೇ ಆಗಿದೆ, ಶಾಶ್ವತ ಸುಖವನ್ನು ಹೊಂದುವ ಸಾಧನ ಕ್ರಮವು ಸಹ ಎಲ್ಲರಿಗೂ ಒಂದೇ ಆಗಿದೆ, ಅಂದರೆ ಸುಖದ ಭಾವವನ್ನು ಹೊಂದುವದೇ ಆಗಿದೆ. ಉದಾಹರಣೆಗೆ, ನಾವು ಯಾವದಾದರೂ ವಿಷಯ ವಸ್ತುವಿನ ಜ್ಞಾನವನ್ನು ಹೊಂದಬೇಕಾದರೆ ನಮ್ಮ ಮನಸ್ಸು ಆ ವಿಷಯ ವಸ್ತುವಿನ ಭಾವವುಳ್ಳದ್ದು ಆಗಬೇಕಾಗುತ್ತದೆ. ಸುಖವು ನಮ್ಮ ನಿಜ ಸ್ವರೂಪವೇ ಆಗಿದೆ, ಅಂದರೆ ಅರುವಿನ ಸ್ವರೂಪವೇ ಆಗಿದೆ. ಗಾಢವಾದ ನಿದ್ರೆಯಲ್ಲಿ ನಾವು ಮರೆತು ಅರಿವು ರೂಪಾಗಿ ಉಳಿದು ಸ್ವರೂಪದ ಆನಂದವನ್ನು ಅನುಭವಿಸುತ್ತೇವೆ, ಆದರೆ ಆಗ ಆನಂದವನ್ನು ಅನುಭವಿಸುತ್ತೇವೆ ಎಂಬ ತಿಳುವಳಿಕೆಯು ಇರುವದಿಲ್ಲ, ಆದರೆ ಗಾಢ ನಿದ್ರೆಯಿಂದ ಎಚ್ಚರವಾದಕೂಡಲೆ ಗಾಢ ನಿದ್ರೆಯಲ್ಲಿ ಆರಾಮವಿತ್ತು, ಆಗ ಏನೂ ತಿಳಿಯಲಿಲ್ಲ ಎಂಬ ಗಾಢ ನಿದ್ರೆಯ ಅನುಭವವನ್ನು ನೆನಪಿಸಿಕೊಂಡು ಹೇಳುತ್ತೇವೆ. ಈಗ ನಾವು ಅರಿತು (ಅರಿವು ರೂಪಾಗಿ ಉಳಿದು) ಅಂದರೆ ತೂರ್ಯಾವಸ್ಥೆ (ಜ್ಞಾನ ಸಮಾಧಿ) ಯನ್ನು ಹೊಂದಿ ಆನಂದವನ್ನು ಹೊಂದಬೇಕಾಗಿದೆ. ನಿದ್ರೆಯ ಸುಂದು ಗಾಢ ನಿದ್ರೆಯ ಸೂತ್ರವು, ಅದರಂತೆ ಜ್ಞಾನ ಸಮಾಧಿಯು (ತೂರ್ಯಾವಸ್ಥೆ) ಶಾಶ್ವತವಾದ ಸುಖವನ್ನು ಹೊಂದುವ ಸೂತ್ರವು. ನಿದ್ರೆಯ ಸುಂದು ಗಾಢವಾಗಿ ಗಾಢ ನಿದ್ರೆಯಾಗುವದು. ನಿದ್ರೆಯ ಸುಂದಿನಲ್ಲಿ ಆನಂದದ ಅನುಭವವು ನಡೆದದ್ದು ಗುರ್ತಾಗುವದು, ನಿದ್ರೆಯ ಸುಂದು ಬಂದಾಗ ಯಾರಾದರೂ ಗದ್ದಲವನ್ನು ಮಾಡುತ್ತಿದ್ದರೆ, ಗದ್ದಲ ಮಾಡಿ ನಮ್ಮ ನಿದ್ರೆಯನ್ನು ಕೆಡಿಸಬೇಡಿರಿ ಎಂದು ಹೇಳುತ್ತೇವೆ, ಜ್ಞಾನ ಸಮಾಧಿಯ (ತೂರ್ಯಾವಸ್ಥೆಯ) ಸೂತ್ರವು ಗಾಢವಾಗಿ ತೂರ್ಯಾತೀತ ಅವಸ್ಥೆಯಾಗುವದು. ಆಗ ಸುಖವನ್ನು ಅನುಭವಿಸುತ್ತೇವೆ ಎಂಬ ತಿಳುವಳಿಕೆಯು ಇರುವದಿಲ್ಲ. ಹೀಗೆ ಶಾಶ್ವತ ಸುಖವನ್ನು ಹೊಂದುವ ಸಾಧನ ಕ್ರಮವು ಸಹ ಎಲ್ಲರಿಗೂ ಒಂದೇ ಆಗಿದೆ. ಅದರಂತೆ ಸಾಧನೆಯಿಂದ ಸಾಧಿಸುವ ಸಾಧ್ಯ ಸ್ಥಿತಿಯೂ (ಶಾಶ್ವತ ಸುಖ) ಸಹ ಎಲ್ಲರಿಗೂ ಒಂದೇ ಆಗಿದೆ. ಆದ್ದರಿಂದ ಸುಖವನ್ನು ಹೊಂದಲು ಎಲ್ಲರಿಗೂ ನೀತಿ, ವೈರಾಗ್ಯ ಮತ್ತು ಆತ್ಮಜ್ಞಾನಗಳೇ ಸಾಧನ ಕ್ರಮವಾಗಿವೆ. ಅಂದಮೇಲೆ ನಮ್ಮ ಸಾಧನ ಕ್ರಮವು (ಧರ್ಮ)ಬೇರೆ, ನಿಮ್ಮ ಸಾಧನ ಕ್ರಮವು(ಧರ್ಮ) ಬೇರೆ; ನಮ್ಮ ಧರ್ಮವು ಶ್ರೇಷ್ಠ, ನಿಮ್ಮ ಧರ್ಮವು ಕನಿಷ್ಠ ಎಂದು ವ್ಯರ್ಥವಾಗಿ ಬಡಿದಾಡುವದು ಏತಕೆ? ಆದರೂ ಮಾನವನು ಭ್ರಾಂತಿಯ ಮೂಲಕ ಧರ್ಮದ ಹೆಸರಿನಲ್ಲಿ ರಕ್ತದ ಕಾಲುವೆಯನ್ನು ಹರಿಸಿದ್ದಾನೆ, ಹರಿಸುತ್ತಿದ್ದಾನೆ, ಮುಂದೇ ಹರಿಸುವನು.